1818-1921. ಅಮೆರಿಕದ ಖಗೋಳ ವಿಜ್ಞಾನಿ. ಈಗ ರ್ಯಾಡ್‍ಕ್ಲಿಫ್ ಕಾಲೇಜ್ ಎಂಬ ಹೆಸರಿರುವ ವಿದ್ಯಾಸಂಸ್ಥೆ ಯಿಂದ ಪದವೀಧರೆಯಾದ ಈಕೆ 1902ರಲ್ಲಿ ಹಾರ್ವರ್ಡ್ ಕಾಲೇಜ್ ವೇಧಶಾಲೆ ಸೇರಿದಳು. ಪೆರುವಿನ ಅರೆಕ್ವಿಪ ಎಬಲ್ಲಿ ಹಾರ್ವರ್ಡ್ ಸ್ಥಾಪಿಸಿದ್ದ ವೇಧಶಾಲೆಯಲ್ಲಿ ಗಗನಸಂಶೋಧನಮಗ್ನೆಯಾಗಿದ್ದಾಗ ಈಕೆಯ ಸಂಶೋಧನ ಜೀವನದ ಮಹತ್‍ಕ್ಷಣ ಪ್ರತ್ಯಕ್ಷವಾಯಿತು (1912). ಆಗ ಲೆವಿಟ್ ಮ್ಯಾಜೆಲ್ಲಾನಿಕ್ ಮೇಘಗಳ (ಕ್ಲೌಡ್-ಸ್ವತಂತ್ರ ಬ್ರಹ್ಮಾಂಡಗಳು) ಮೇಲೆ ಲಕ್ಷ್ಯ ಕೇಂದ್ರೀಕರಿಸಿದ್ದಳು. ಇವುಗಳ ಸದಸ್ಯ ತಾರೆಗಳೆಲ್ಲವೂ ನಮ್ಮಿಂದ ಸುಮಾರಾಗಿ ಒಂದೇ ದೂರದಲ್ಲಿವೆಯೆಂದು ಭಾಸವಾಗುತ್ತವೆ - ಅಂದರೆ ಪ್ರಕಾಶವ್ಯತ್ಯಯ ವಿಶೇಷವಾಗಿ ಗೋಚರಿಸುತ್ತಿರಲಿಲ್ಲ. ಆದರೆ ಈ ಏಕತಾನವಿತಾನದಲ್ಲಿಯೂ ಕೆಲವು ಜೋಡಿನಕ್ಷತ್ರಗಳು ಗಮನಾರ್ಹ ಪ್ರಕಾಶಚಂಚಲತೆ ಪ್ರದರ್ಶಿಸುತ್ತಿದ್ದುವು! ಅಂದರೆ ಅವುಗಳ ಉಜ್ಜ್ವಲತೆಯಲ್ಲಿ ನಿಯತಕಾಲಿಕ ಏರಿಳಿತಗಳು ಎದ್ದು ಕಾಣುತ್ತಿದ್ದುವು. ಮೊತ್ತಮೊದಲನೆಯ ಜೋಡಿ ಗಮನಕ್ಕೆ ಬಂದದ್ದು ಸಿಫಿಯಸ್ (ಯುಧಿಷ್ಠಿರ) ನಕ್ಷತ್ರಪುಂಜದ ಲ್ಲಾದ್ದರಿಂದ ಈ ವರ್ಗದ ನಕ್ಷತ್ರಗಳಿಗೆ ಸಿಫೈಡ್ ಚಂಚಲತಾರೆಗಳೆಂಬ ಹೆಸರು ಬಂತು. ಇವುಗಳ ರಹಸ್ಯ ಶೋಧನೆಯ ಹಾದಿ ಹಡಿದ ಈಕೆ ನಕ್ಷತ್ರ ಛಾಯಾಗ್ರಹಣ ತಂತ್ರವನ್ನು ಪರಿಷ್ಕರಿ ಮತ್ತು ನಕ್ಷತ್ರಗಳ ಕಾಂತಿಮಾನ (ಲ್ಯೂಮಿನಾಸಿಟಿ) ಅಳೆಯುವ ವಿಧಾನವನ್ನು ಪರಿಪಕ್ವಗೊಳಿಸಿದಳು. ಮುಂದೆ ಹೊಸಹೊಸ ಚಂಚಲತಾರೆಗಳನ್ನು ಆವಿಷ್ಕರಿಸಿದಳು. ಸಿಫೈಡ್ ವರ್ಗದ ತಾರೆಗಳನ್ನು ಬಳಸಿ ಬ್ರಹ್ಮಾಂಡಗಳ (ಗ್ಯಾಲಕ್ಸೀಸ್) ದೂರಗಣನೆಗೆ ವಿಧಾನ ರೂಪಿಸಿದಳು. 

ಸಿಫೈಡ್ ವರ್ಗದ ಚಂಚಲತಾರೆಗಳಲ್ಲಿ ಉಜ್ಜ್ವಲತಾ ವ್ಯತ್ಯಯದ ಅವಧಿಗೂ ಆಂತರಿಕ ಕಾಂತಿಮಾನಕ್ಕೂ ನೇರ ಸಂಬಂಧ ಇದೆ ಎಂಬುದನ್ನು ತೋರಿಸಿಕೊಟ್ಟಳು. ಈ ಸರಳ ಸೂತ್ರ ಬಳಸಿ ಮ್ಯಾಜೆಲಾನಿಕ್ ಮೇಘಗಳ ದೂರವನ್ನು ಪತ್ತೆಮಾಡಿದಳು. ಇತರ ಬ್ರಹ್ಮಾಂಡಗಳ ದೂರಮಾಪನೆಗೂ ಈಗ ಇದೇ ಸೂತ್ರವನ್ನು ಅನ್ವಯಿಸಲಾಗುತ್ತಿದೆ.		

(ಎಸ್‍ಎಚ್.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ